Wednesday, September 20, 2017

ಶತಾವಧಾನಿ ಗಣೇಶರ ಸೂಕ್ತಿಗಳು

1. ಸುಖ ಪಡಬೇಕು ಅನ್ನುವವರು ಸಾಧನವನ್ನು ಇಟ್ಟುಕೊಳ್ಳುವುದಿಕ್ಕಿಂತ ಮುಂಚೆ ಸಮಯವನ್ನು ಇಟ್ಟುಕೊಳ್ಳಬೇಕು.

#ಆನಂದಮಯ_ಜೀವನಕ್ಕೆ_ಭಾರತೀಯ_ಮೌಲ್ಯಗಳು; #ಉಪನ್ಯಾಸ
--------------------------------------------------------------------------------------------------------------------------------------------
2. ಅಭ್ಯಾಸವಿಲ್ಲದ ಜ್ಞಾನ ಕುಂಟು. ಜ್ಞಾನವಿಲ್ಲದ ಅಭ್ಯಾಸ ಕುರುಡು. 

#ಭಾರತೀಯ_ಸಂಸ್ಕೃತಿಗೆ_ವಿದ್ಯಾರಣ್ಯರ_ಕೊಡುಗೆ #ಉಪನ್ಯಾಸ
--------------------------------------------------------------------------------------------------------------------------------------------
3. ಅರಿಯುವುದಕ್ಕಾಗಿ ಬಾಳುವುದಲ್ಲ, ಬಾಳುವುದಕ್ಕಾಗಿ ಅರಿಯುವುದು ಎಂಬ ಮಹಾಸೂತ್ರವೇ ಭಾರತೀಯದರ್ಶನಗಳ ಜೀವಾಳ. 

#ಷಡ್ದರ್ಶನಸಂಗ್ರಹ #ಗ್ರಂಥ
--------------------------------------------------------------------------------------------------------------------------------------------





Wednesday, September 7, 2016

ಶತಾವಧಾನಿ ಡಾ|| ರಾ. ಗಣೇಶರೊಂದಿಗೆ ’ಪರಿಸರಸ್ನೇಹಿ ಗಣಪತಿ’ ವಿಷಯಕವಾದ ಬಾನುಲಿ (FM 102.9) ಸಂದರ್ಶನ

01.09.2016ರಂದು ಶತಾವಧಾನಿ ಡಾ|| ರಾ. ಗಣೇಶರೊಂದಿಗೆ ’ಪರಿಸರಸ್ನೇಹಿ ಗಣಪತಿ’ ವಿಷಯಕವಾದ ಬಾನುಲಿ (FM 102.9) ಸಂದರ್ಶನ:
ಗಣಪತಿಯು ಪೃಥ್ವೀಸ್ಥಾನೀಯ ದೇವತೆ – ಮಣ್ಣಿನ ಮಗ. ವೇದಗಳಲ್ಲಿ ಕಾಣಿಸಿಕೊಳ್ಳುವ ಬೃಂಹಣಸ್ಪತಿ, ವಾಕ್ಪತಿ (ಮಾತು, ಜ್ಞಾನ, ಅರಿವು, ವಿದ್ಯೆ) ಎಂಬ ತತ್ತ್ವವು ಈತನೇ. ಅಧ್ಯಾತ್ಮವಾಗಿ ಕಂಡಾಗ ಆತ ಮಾತಿನ ಒಡೆಯ. ಮೃದಂಗವಾದ ದೇಹಕ್ಕೆ ನಾದದಂತೆ ಗಣಪತಿ. ತಂತ್ರಶಾಸ್ತ್ರಗಳಲ್ಲಿ ಮಣ್ಣಿನ ಮೂಲವಾದ ಪೃಥ್ವಿಯು ಮೂಲಾಧಾರಚಕ್ರದ ಅಧಿಷ್ಠಾನದೇವತೆ. ಗಣಪತಿಸ್ವರೂಪವು ಅಮೂರ್ತವಾಗಿ ವಾಕ್ಕು–ನಾದ–ಮಾತು–ಮಾತೆನ್ನುವ ಜ್ಯೋತಿರ್ಲಿಂಗ; ಮೂರ್ತವಾಗಿ ಮಣ್ಣು. ಅನುಭವಕ್ಕೆ (Experience) ತಂದುಕೊಂಡಾಗ, ಅದು ಅಮೂರ್ತ. ಅಭಿವ್ಯಕ್ತವಾದಾಗ (Expression) ಮೂರ್ತ. ಹಾಗಾಗಿ ಗಣಪತಿಮೂರ್ತಿಯನ್ನು ಮಣ್ಣಿನಲ್ಲಿಯೇ ಮಾಡಬೇಕು. ಆಗಲೇ ಅದಕ್ಕೆ ಶಾಸ್ತ್ರಪೂರ್ಣತೆ.
ನಮ್ಮ ಗಣಪ: ಎಲ್ಲರೂ ಚಿಕ್ಕವಯಸ್ಸಿನಲ್ಲಿ ಮಣ್ಣಿನಲ್ಲಿ ಆಟವಾಡಿ ಒಂದಲ್ಲ ಒಂದು ಆಟದ ಸಾಮನನ್ನೋ ವಿಗ್ರಹವನ್ನೋ ಮಾಡಿಯೇ ಇದ್ದೇವೆ. ಇದೇ ಭಾವವನ್ನು ಘನವಾಗಿಸಿ, ಹಿರಿಯರು ವರ್ಷಕ್ಕೊಮ್ಮೆ ಮತ್ತೆ ಆ ಬಾಲ್ಯಭಾವವನ್ನು ಪುನಾಜೀವಿಸುವುದು ಒಳ್ಳೆಯದು. ಸಾಮೂಹಿಕವಾಗಿ ಸೇರಿ, ಚಿತ್ರಶಿಲ್ಪಿಗಳಿಂದ ಮಾರ್ಗದರ್ಶನ ಪಡೆದು ನಾವೇ ನಮ್ಮ ಮಣ್ಣಿನ ವಿಗ್ರಹಗಳನ್ನು ಮಾಡಿಕೊಳ್ಳುವುದು ಪ್ರಶಸ್ತ. ವಿಸರ್ಜಿಸಿದ ಗಣಪವಿಗ್ರಹದ ಮಣ್ಣನ್ನು ಹಾಗೆಯೇ ಸಂಗ್ರಹಿಸಿಟ್ಟು, ಮುಂದಿನವರ್ಷಗಳಲ್ಲಿ ವಿಗ್ರಹವನ್ನು ಮಾಡಬಹುದು. ಮಣ್ಣೂ ಹೆಚ್ಚುಹೆಚ್ಚು ಹದವಾಗಿ ನುಣುಪಾಗಿ ಜೇಡಿಯಾಗುತ್ತದೆ. ಈಚಿನ ಐದು ವರ್ಷಗಳಿಂದ ನಾನು ಹೀಗೆಯೇ ಮಾಡುತ್ತಿದ್ದೇನೆ. ನಮ್ಮ ಕೂಟವಂತೂ ನನ್ನೊಬ್ಬ ಸ್ನೇಹಿತ ಚಂದ್ರಶೇಖರನ ಮನೆಯಲ್ಲಿ ನಡೆಯುತ್ತದೆ. ವಿಶಾಲವಾದ ಆವರಣವಿದೆ. ಅಲ್ಲಿ ಶಾಮಿಯಾನ ಹಾಕಿಸಿ ಹಬ್ಬದಂತೆ ನಡೆಯುತ್ತದೆ. ಭಾಗವಹಿಸುವವರ ಇಡಿಯ ಕುಟುಂಬ ಅಲ್ಲಿರುತ್ತದೆ; ಎಲ್ಲ ವಯಸ್ಸಿನವರೂ ಇರುತ್ತಾರೆ. ಅದೊಂದು ಅರ್ಧದಿನದ ಸಂಭ್ರಮ, ಮಧ್ಯಾಹ್ನಭೋಜನದೊಂದಿಗೆ ಮುಗಿಯುತ್ತದೆ. ಅವನ್ನೆಲ್ಲ ಸ್ನೇಹಿತರು ಚೆನ್ನಾಗಿ ನಡೆಸುತ್ತಿದ್ದಾರೆ. ವಿನಯ್ ಹೆಗಡೆ, ವಿನೋದ್ ಗೌಡ, ರಾಘವೇಂದ್ರ ಹೆಗಡೆ ಎಂಬ ನುರಿತ ಕಲಾವಿದರು ಪ್ರೀತಿಯಿಂದ ಬಂದು ಮಾರ್ಗದರ್ಶನ ನೀಡುತ್ತಾರೆ. ಎಲ್ಲರ ವಿಗ್ರಹಗಳ ಸ್ವರೂಪಗಳ ಬಗೆಗೆ ಹರಟುತ್ತೇವೆ, ಶಿಲ್ಪನಕಲೆಯ ಓರೆಕೋರೆಗಳನ್ನು ವಿಮರ್ಷಿಸುತ್ತೇವೆ. ಗಣಪತಿಮಾಹಾತ್ಮ್ಯವನ್ನು ಗಣಪತಿತತ್ತ್ವವನ್ನು ಚರ್ಚಿಸುವುದಾಗುತ್ತದೆ. ಗಾಯನರಂಜನೆಯೂ ಇರಬಹುದು. ಇವೆಲ್ಲ ಭಾವದಿಂದ ನಡೆಯುವುದು, ಭವದಿಂದಲ್ಲ. Not material investment, but time. ಸುಮಾರು ನಾಲ್ಕು ಗಂಟೆ ಬೇಕಾಗುತ್ತದೆ. ಒಬ್ಬೊಬ್ಬರ ವಿಗ್ರಹವು ಒಂದೊಂದು ವಿಧದ್ದು, ಸ್ವಂತಿಕೆಯದು, ಸ್ವೋಪಜ್ಞತೆಯದು, ಧ್ಯನ್ಯತೆಯನ್ನೀಯುವಂಥದು. ಗಣಪತಿಶಿಲ್ಪನವೊಂದಲ್ಲದೆ, ಈ ಸಂವಹನದಿಂದ ವ್ಯಕ್ತಿವಿಶ್ವಾಸವು ಬೆಳೆದು, ವ್ರತಕ್ಕಿಂತ ಪೂರ್ವಸಿದ್ಧತೆಯು ಚೆನ್ನಾಗಿದ್ದಿತು, ನಿಜವಾದ ಹಬ್ಬವು ಇಲ್ಲಿಯೇ ಆಯಿತು ಎಂದು ಕೆಲವರು ಹೇಳಿದ್ದುಂಟು. ವರ್ಷದ ಈ ದಿನಕ್ಕಾಗಿ ಎಲ್ಲರೂ ಕಾದಿರುತ್ತಾರೆ ಕೂಡ.
ಗಣಪತಿಮೂರ್ತಿನಿರ್ಮಾಣದಲ್ಲಿ ಮಣ್ಣಿನಿಂದ ವಿಭಿನ್ನವಾದ ದ್ರವ್ಯಗಳ ಬಳಕೆ: ಇದು ಬಹಳ ತಪ್ಪು. ಹಾಗೆ ಮಾಡುವುದರಿಂದ ನಾವು ಪರಿಸರ, ಪರಂಪರೆ, ಮಾನವತೆಗೆ ಅನ್ಯಾಯವೆಸಗುತ್ತಿದ್ದೇವೆ. ಸನಾತನಧರ್ಮದಲ್ಲಿ, ವೇದಸಂಸ್ಕೃತಿಯಲ್ಲಿ (ಜನಪದಸಂಸ್ಕೃತಿಯೂ ಇದೇ) ಪರಿಸರವಿರುದ್ಧವಾದುದೇನೂ ಇಲ್ಲ. ಕಾರಣ, ಇಂದಿನ ಯಂತ್ರೋದ್ಯಮ ಹಾಗೂ ಕೃತಕವಸ್ತುಗಳಿಲ್ಲದ ಕಾಲದಲ್ಲಿ ಆವಿಷ್ಕಾರವಾಗಿ ಬೆಳೆದದ್ದು ಅದು. ಇಡೀ ಪ್ರಕೃತಿಯೇ ಸವಾಲಾಗಿ ಕಂಡರೂ ಅದನ್ನು ಆರಾಧಿಸಿ ಗೌರವಿಸಿದರು ನಮ್ಮ ಪೂರ್ವೀವಿಕರು. ಅವರಿಗೆ ಪ್ರಕೃತಿಯನ್ನು ಕುರಿತು ಬಹಳ ಭಕ್ತಿಭಾವವಿದ್ದಿತು. ಮಣ್ಣಿನ ಮೂರ್ತಿಯನ್ನು ಪೂಜಿಸುತ್ತೇವೆ ಎಂಬ ತತ್ತ್ವವು ಮುಖ್ಯವಾಗಿದ್ದು, ಬಣ್ಣವು ಈ ಮಣ್ಣಿನ ಭಾವವನ್ನು ತಪ್ಪಿಸುತ್ತದೆ. ಬಣ್ಣವು ಬೇಕೆಂದಾದಲ್ಲಿ ನೈಸರ್ಗಿಕವಾದ ಬಣ್ಣಗಳನ್ನು ಬಳಸಬೇಕು – ಅರಿಶಿನ, ಕುಂಕುಮ, ಗಿಡಗಳ ಹಸುರು, ಬಟ್ಟೆಯ ನೀಲಿ ಇತ್ಯಾದಿ. ತೈಲವರ್ಣಗಳಿಗಿಂದ ಜಲವರ್ಣಗಳು ಮೇಲು, ಜಲವರ್ಣಗಳಿಗಿಂತ ಸಹಜವರ್ಣಗಳು ಮೇಲು, ಬಣ್ಣವನ್ನೇ ಬಳಸದಿರುವುದು ಮತ್ತೂ ಮೇಲು. ಬಣ್ಣದ ಗಣಪನನ್ನಿರಿಸಿ ಅವನನ್ನು ಪತ್ರಪುಷ್ಪಗಳಿಂದ ಮುಚ್ಚಿಬಿಟ್ಟರೆ ಆ ಬಣ್ಣದ ಪ್ರಾಶಸ್ತ್ಯವೇನುಳಿಯಿತು? ಅಮೂರ್ತವನ್ನು ಅಸ್ವಾದಿಸಲಾಗದಿರುವ ನಮ್ಮ ಮನಃಕಾರ್ಪಣ್ಯವೇ ಇದು. ಪೂಜಾದ್ರವ್ಯಗಳಾದ ಹರಿದ್ರಾ-ಕುಂಕುಮ-ಸಿಂದೂರಚೂರ್ಣಾದಿಗಳಿಂದ ಪೂಜಿತವಾದ ಗಣಪನಿಗೊಂದು ಅಲೌಕಿಕವಾದ ವರ್ಚಸ್ಸು-ಕಾಂತಿಗಳು ಉಂಟಾಗುತ್ತದೆ. ಬಣ್ಣದ ಕೊರತೆ ಎಂಬುದೇ ಇರದು. ಇದು ನನ್ನ ಹಾಗೂ ಹಲವರ ಅನುಭವ.
ವಿಗ್ರಹವನ್ನು ಮಣ್ಣಿನಲ್ಲಿ ಮಾಡಲು ಮುಖ್ಯಕಾರಣವೆಂದರೆ, ಗಣಪತಿಯು ಕೃಷಿದೇವತೆ. ಭಾದ್ರಪದ ತತ್ಪೂರ್ವದ ಶ್ರಾವಣಗಳು ಮಳೆಗಾಲ. ಮಳೆಯು ಮೆಕ್ಕಲುಮಣ್ಣನ್ನು ಕೊಚ್ಚಿ ಕೆರೆಗಳಿಗೆ ಒಯ್ದಿರುತ್ತದೆ. ಹೂಳು ಹೆಚ್ಚಾಗುತ್ತದೆ. ಆ ಹೂಳನ್ನು ತೆಗೆಯಬೇಕು (De-silting), ಏಕೆಂದರೆ ಹೂಳು ಹೆಚ್ಚಾದಂತೆ ಜಲಾಶಯಗಳ ಜಲಸಂಗ್ರಹಣಶಕ್ತಿ ಕುಂದುತ್ತದೆ. ಈ ಕುರಿತು ಶಾಸನಗಳಲ್ಲಿ ಉಲ್ಲೇಖಗಳಿವೆ, ಧರ್ಮಸೂತ್ರಗಳಿವೆ. ಒಂದೊಂದು ನದಿ-ಕೆರೆಗಳಲ್ಲಿ ಸ್ನಾನ ಮಾಡಿದಾಗಲೂ ಪ್ರತಿ ಮುಳುಗಿಗೆ ಮೂರು ಹಿಡಿಯಷ್ಟು ತಳದ ಮಣ್ಣನ್ನು ದಡಕ್ಕೆ ಹಾಕಬೇಕು ಎಂದಿದೆ ನಾರದೀಯಸ್ಮೃತಿಯಲ್ಲಿ. ಇದರಿಂದಾಗಿ ಸಹಜವಾಗಿ ಹೂಳನ್ನು ತೆಗೆಯುವುದಾಗುತ್ತದೆ. ಇದು ಮಕ್ಕಳಿಗೆ ಚೆನ್ನಾಗಿ ಗೊತ್ತಿದೆ: ಗಣೇಶ ಬಂದ, ಚಿಕ್ಕೆರೆಲಿ ಎದ್ದ, ದೊಡ್ಡ ಕೆರೆಲಿ ಬಿದ್ದ. ಚಿಕ್ಕಕೆರೆಗಳ ಮಣ್ಣನ್ನು ತೆಗೆದು ಗಣಪತಿಮೂರ್ತಿಯನ್ನು ಮಾಡುತ್ತಿದ್ದರು. ಇದಕ್ಕಲ್ಲದೆ, ಕೆರೆಯ ಹೂಳು ಗೊಬ್ಬರವಾದ್ದರಿಂದ ಅದನ್ನು ಹೊಲಗಳಿಗೆ ಹಾಕುತ್ತಿದ್ದರು. ಶಿವರಾತ್ರಿಯು ಕಳೆಯುತ್ತಿದ್ದಂತೆ, ರೈತರೆಲ್ಲ ಸಾವಕಾಶವಾಗಿ ಗಾಡಿಕಟ್ಟಿ ಹೊಲಗಳಿಗೆ ಕೆರೆಗೋಡನ್ನು ಹೊಡೆಯುತ್ತಿದ್ದರು; ಬರುವ ಮುಂಗಾರಿಗಾಗಿ ತಯಾರಿ ನಡೆಸುತ್ತಿದ್ದರು. ಹಾಗಾಗಿ ಶುದ್ಧಮಣ್ಣಿನಗಣಪತಿಯನ್ನು ಮತ್ತೆ ಕೆರೆಗೆ ಬಿಡಬಹುದಾಗಿತ್ತು. ಇದೊಂದು ಅದ್ಭುತವಾದ ತತ್ತ್ವವೂ ಹೌದು. ಸಾವಿಗಾಗಿ ಸ್ಥೈರ್ಯದಿಂದ ಸಿದ್ಧರಾಗುವುದು ಸನಾತನಧರ್ಮದ ಮುಖ್ಯವಾದೊಂದು ಅಂಗ – ಸಾವಿನ ವಿಜೃಂಭಣೆ – To face death in all dignity and glory! ಸಾವನ್ನು ಸಮಾಧಾನದಿಂದ ಕಾಣಬಲ್ಲವನು ಬದುಕನ್ನು ಹಸನಾಗಿರಿಸಿಕೊಳ್ಳುತ್ತಾನೆ. ಸೃಷ್ಟಿ-ಸ್ಥಿತಿ-ಲಯಗಳು ವಿವಿಕ್ತಘಟನೆಗಳಾಗಿರದೆ, ಆವರ್ತನಪ್ರಾಯವಾದುವು. ನಮ್ಮೆಲ್ಲ ಆಚರಣೆಗಳು ಈ ಆವರ್ತಕಸೃಷ್ಟಿ-ಲಯಗಳ ಪ್ರತೀಕವಾಗಿವೆ. ಆಕಾಶದಿಂದ ವಾಯು, ವಾಯುವಿನಿಂದ ಅಗ್ನಿ, ಅಗ್ನಿಯಿಂದ ಜಲ, ಜಲದಿಂದ ಪೃಥ್ವಿ, ಪೃಥಿವಿಯಿಂದ ಸಸ್ಯ, ಸಸ್ಯದಿಂದ ಜೀವ ಎಂದಿದೆ ತೈತ್ತಿರೀಯೋಪನಿಷತ್ತಿನಲ್ಲಿ (ಆಕಾಶಾತ್ ವಾಯುಃ...). ಸೃಷ್ಟಿತತ್ತ್ವವನ್ನು ತೋರಿಸುವಂತೆ ಆಕಾಶಸ್ವರೂಪವಾದಂಥ ಶಬ್ದವು ಗಣಪತಿಯಲ್ಲಿ ಮಣ್ಣಿನ ಸ್ವರೂಪವನ್ನು ಪಡೆದುಕೊಂಡಿದೆ. ಅದ್ಭ್ಯಾ ಪೃಥಿವೀ - ನೀರಿನಿಂದ ಮಣ್ಣು. ಹಾಗಾಗಿ ಮಣ್ಣನ್ನು ಮತ್ತೆ ನೀರಿಗೆ ಬಿಟ್ಟು ಆವರ್ತನವನ್ನು ಪೂರ್ಣಗೈಯುವುದು.
ಗಣಪತಿಯು ಕೃಷಿಸಂಕೇತ ಹೇಗೆ ಎಂಬುದನ್ನು ಬೇರೊಂದು ರೀತಿಯಿಂದ ನೋಡೋಣ. ಪಾರ್ವತಿಯು ಜಳಕಮಾಡುವಾಗ ಮೋಡಗಳು ಮರೆಯಾಗುತ್ತವೆ. ಶಿವನಿಗೆ ಕಾಣಿಸಳು. ಮೋಡಗಳು ಸರಿದು ಬೆಳಕಿನಲ್ಲಿ ಅವನು ನೋಡಿದಾಗ, ಭೂಮಿಯು ಸಸ್ಯಶ್ಯಾಮಲವಾಗಿರುತ್ತದೆ. ಅವಳನ್ನು ಹುಡುಕುವ ನೆವದಲ್ಲಿ ಆ ಹಸುರುಬೆಳೆಯನ್ನು ಕತ್ತರಿಸುವುದೇ ಗಣಪತಿಯ ಶಿರಶ್ಛೇದನದ ಸಂಕೇತ. ಈ ಕುಯಿಲಿನ ರಾಶಿಯನ್ನು (ಸ್ತಂಭ) ಒಟ್ಟುಗೂಡಿಸಿ ಹುಲ್ಲುಹಗ್ಗದಿಂದ ಬಿಗಿಸುತ್ತಾರೆ. ಅವನ ಎರಡು ಕಿವಿಗಳು ಮೊರದ ಸಂಕೇತ - ಶೂರ್ಪ್ಪಕರ್ಣ. ಅವುಗಳಿಂದ ಧಾನ್ಯಶುದ್ಧಿ. ಅವನ ಏಕದಂತವು ನೇಗಿಲಿನ ಸಂಕೇತ. ಬೆಳೆಯಿದ್ದಲ್ಲಿ ಇಲಿಯು ಇದ್ದೇತೀರಬೇಕು. ಹೀಗೆ, ಗಣಪತಿಯು ಕೃಷಿದೇವತೆ. ಆಷಾಢ-ಶ್ರಾವಣಗಳ ದೇವತೆಯಾಗಿ ಗಣಪತಿಯನ್ನು ಪೂಜಿಸುವ ಆಚರಣೆಯನ್ನು ತುಳುನಾಡಿನ ಆಟಿಕಳಂಜದಲ್ಲಿ ನೋಡಬಹುದು. ಅನೇಕ ಕಡೆಗಳಲ್ಲಿ ಹೀಗುಂಟು. ಸಂಸ್ಕೃತಿಯನ್ನೆಲ್ಲ ಪ್ರತಿಬಿಂಬಿಸುವಂತಿದೆ ಗಣಪಾರಾಧನೆ.
ಸ್ವಂತವಾಗಿ ಮಾಡಿದ ವಿಗ್ರಹದಲ್ಲಿ ಓರೆಕೋರೆ-ದೋಷಗಳಿದ್ದು ಪೂಜೆಗೆ ಯೋಗ್ಯವಲ್ಲವೆಂಬ ಭಾವನೆ: ಇದಕ್ಕೂ ನಮ್ಮಲ್ಲಿ ಪರಿಹಾರವಿದ್ದೇ ಇದೆ. ಉತ್ತಮವಾದ್ದು ಸ್ವಕೃತವಾದ ಮೂರ್ತಿ, ಅಧಮವಾದ್ದು ಕ್ರೀತವಾದ ಮೂರ್ತಿ, ಅಧಮಾಧಮವಾದ್ದು ಕದ್ದ ಮೂರ್ತಿ ಎಂದು ಆಗಮಗಳು ಹಾಗೂ ಶಾಸ್ತ್ರಗ್ರಂಥಗಳು ಹೇಳಿವೆ. ಮಣ್ಣಿನದನ್ನೇ ಮಾಡಿ ವಿಸರ್ಜಿಸಬೇಕೆಂದಿಲ್ಲ. ಲೋಹದ್ದನ್ನು ಪೂಜಿಸಿ ವಿಸರ್ಜನಶಾಸ್ತ್ರವನ್ನು ಮಾಡಿ ಮತ್ತೆ ಬಳಸಬಹುದು. ಚಿತ್ರಪಟವನ್ನು ಪೂಜಿಸಬಹುದು. ಪರಿಸರಹಾನಿಯಾದ ವಿಗ್ರಹವು ಅಧಮತಮವಾದದ್ದು. ಅಜ್ಞೋ ವದತಿ ವಿಷ್ಣಾಯ ಜ್ಞಾನೀ ವದತಿ ವಿಷ್ಣವೇ| ದ್ವಯೋರಪಿ ಫಲಂ ಭೂಯಾತ್ ಭಾವಜ್ಞೋ ಭಗವನ್ ಹರಿಃ|| ವಿಷ್ಣವೇ ಎಂದು ವ್ಯಾಕರಣಶುದ್ಧವಾಗಿ ಹೇಳಬೇಕಾದ ವಿಧಿ ವ್ಯಾಕರಣವಿದ್ವಾಂಸನಿಗೆ. ಭಕ್ತನು ವಿಷ್ಣಾಯ ಎಂದರೂ ಫಲವುಂಟು, ಏಕೆಂದರೆ ಪರಮಾತ್ಮನು ಭಾವಜ್ಞ. ಮೂರ್ತಿಯಲ್ಲಿನ ಓರೆಕೋರೆಗಳು ದೋಷವೆನಿಸದು. ಮಣ್ಣಿನ ಮೂರ್ತಿಯಾಗಿ ಗಣಪತಿಯನ್ನು ಪೂಜಿಸುವ ಮುನ್ನ ನಿಯಮದಂತೆ ವಿಘ್ನೇಶ್ವರಪೂಜೆಯಾಗಲೇಬೇಕು. ಸಗಣಿಯನ್ನೋ ಮಣ್ಣನ್ನೋ ಚಿಕ್ಕದಾಗಿ ಗೋಪುರಾಕಾರದಲ್ಲಿ ಮಾಡಿ ಅದರಲ್ಲಿ ಗರಿಕೆಯನ್ನು ಸಿಕ್ಕಿಸಿ ಪಿಳ್ಳಾರಿಯೆನ್ನುತ್ತೇವೆ; ತಮಿಳಿನ ಪಿಳ್ಳೈಯ್ಯಾರ್. ಮುಖ-ಕೈ-ಕಾಲುಗಳಾವುವೂ ಇಲ್ಲದ ಪಿಳ್ಳಾರಿಯು ವಿಘ್ನೇಶ್ವರನಾಗಬಹುದೆಂದಾದರೆ, ಈ ಪ್ರತೀಕಪೂಜೆಯೇ ಸಾಧುವೆಂದಾದರೆ, ಪ್ರತಿಮಾರೂಪದಲ್ಲಿ ಒಂದಷ್ಟು ಊನವಿದ್ದರೆ ಅದು ದೋಷವೆನಿಸದು.
ಆಚರಣೆಯಲ್ಲಿನ ವಿಕೃತಿ: ಶಾಸ್ತ್ರಗಳ ಪ್ರಕಾರ ಎಲ್ಲವೂ ನೈಸರ್ಗಿಕವೇ ಆಗಿರಬೇಕು. ಸಾವಯವವಾದುದನ್ನೇ (biodegradable) ಬಳಸಬೇಕು. ಇವನ್ನೂ ದುಂದಾಗಿ ಬಳಸಬಾರದು. ಗಿಡದಿಂದ ಮೂರನೆಯ ಒಂದುಭಾಗದಷ್ಟು ಹೂವನ್ನು ಮಾತ್ರ ಕೊಯ್ದುಕೊಳ್ಳಬೇಕು ಎಂದು ಶಾಸ್ತ್ರಾಗಮಗಳಲ್ಲಿ ಹೇಳಿದೆ. ಗಿಡದ ಎಲ್ಲ ಹೂವನ್ನೂ ಕೊಯ್ದರೆ ಅದನ್ನು ಬಂಜೆಯಾಗಿಸಿದಂತೆ ಎಂದಿದ್ದಾರೆ ವಿ. ಸೀ. ಆವಾಹನೆಯಿಂದ ವಿಸರ್ಜನೆಯವರೆಗಿನ ಷೋಡಶೋಪಚಾರಪೂಜೆಯಲ್ಲಿ ಹೊರೆಹೊರೆ ಪುಷ್ಪಪತ್ರಗಳನ್ನು ಬಳಸಲಾಗದು. ನಮ್ಮ ಭಕ್ತಿಯು ಪೂಜಾದ್ರವ್ಯಪ್ರಮಾಣಕ್ಕನುಗುಣವಾಗಿರದು. ಎಲ್ಲರೂ ಸೇರಿ ಕೌಟುಂಬಿಕವಾಗಿ ಸಾಮೂಹಿಕವಾಗಿ ಸಾಮರಸ್ಯದಿಂದ ನಡೆಸುವ ಚಟುವಟಿಕೆಯಾದ ಪೂಜೆಯು ವಿಗ್ರಹಮುಖದಲ್ಲಿ ಮಾಡುವ ಯಜ್ಞ – ಯಜ್ ಪೂಜಾಯಾಂ ಸಂಗತಿಕರಣೇ ದಾನೇ ಎಂಬ ಧಾತು. ಹಂಚಿಕೊಂಡು ಬಾಳುವುದು ಎಂದೇ ಯಜ್ಞದ ಅರ್ಥ. ಇಪ್ಪತ್ತೊಂದು ಪತ್ರಗಳೆಂದರೆ, ಇಪ್ಪತೊಂದು ಕಟ್ಟುಗಳಲ್ಲ! ಎಲ್ಲ ವಿಧವಾದ ಪತ್ರಗಳು ಸಿಗದೆಹೋದರೆ, ಪ್ರತ್ಯಾಮ್ನಾಯವಾಗಿ ಗರಿಕೆ-ತುಳಸಿಗಳನ್ನೇ ಬಳಸಬಹುದು ಎಂದಿದೆ. ಮೀಮಾಂಸಾಶಾಸ್ತ್ರದ ಪ್ರಕಾರ, ಮಂತ್ರೋಚ್ಚಾರಣಕ್ಕೇ ತತ್ತದ್ವಸ್ತುವನ್ನು ನಿರ್ದೇಶಿಸುವ ಶಕ್ತಿಯುಂಟು. ದೂರ್ವಾಯುಗ್ಮಪೂಜೆಯಲ್ಲಿ ಹಾಕಬೇಕಾದ್ದು ಏಳೇ ಗರಿಕೆ. ಅಷ್ಟೋತ್ತರಶತನಾಮಾವಲಿಗೆ ಪತ್ರ-ಪುಷ್ಪಗಳಾವುವೂ ಆಗಬಹುದು. ಇಷ್ಟೆಲ್ಲವನ್ನು ಸೇರಿಸಿದರೆ ಒಂದು ಬೊಗಸೆಗಿಂತ ಹೆಚ್ಚು ಆಗದು. ಹಾಗಲ್ಲದೆ ಹೊರೆಗಟ್ಟಲೆ ಪತ್ರಪುಷ್ಪಗಳನ್ನು ಗಣಪತಿಯೊಂದಿಗೆ ಭಾವಿ-ಕೆರೆಗಳಿಗೆ ಚೆಲ್ಲಿ ಜಲಮಾಲಿನ್ಯವನ್ನು ಮಾಡುವ ಬದಲಾಗಿ ಉದ್ಯಾನವನಗಳ ಗಿಡಗಳ ಪಾತಿಗಳಿಗೆ ಹಾಕಬಹುದು. ಪೂಜಾದ್ರವ್ಯಗಳ ವಿಷಯದಲ್ಲಿ ಆಡಂಬರ ಸಲ್ಲದು. ಥರ್ಮೊಕೋಲ್-ಪ್ಲಾಸ್ಟಿಕ್-ಪ್ಲಾಸ್ಟರ್ ಆಫ್ ಪ್ಯಾರಿಸ್ ಇತ್ಯಾದಿ ದ್ರವ್ಯಗಳಿಂದ ವಿಗ್ರಹವನ್ನು ಮಾಡುವುದು, ಅವುಗಳಿಗೆ ಹಾನಿಕಾರಕ ರಾಸಾಯನಿಕವರ್ಣವನ್ನು ಹಚ್ಚುವುದು ತುಂಬ ತಪ್ಪು. ಮೊದಲಲ್ಲಿ ಬಣ್ಣಗಳು ಇರಲೇ ಇಲ್ಲ. ವರ್ಣರಾಹಿತ್ಯವೇ ಶ್ರೇಷ್ಠ ಎಂದು ಧರ್ಮಶಾಸ್ತ್ರಗಳಲ್ಲಿ ಹೇಳಿದೆ - ಪಾರ್ಥಿವಲಿಂಗದಂತೆಯೇ ಪಾರ್ಥಿವಗಣಪತಿ. ಈ ಹಾನಿಕಾರಕ ದ್ರವ್ಯ-ವರ್ಣಗಳಿಂದಾದ ವಿಗ್ರಹವನ್ನು ವಿಸರ್ಜಿಸುವಾಗ, ಹೊರೆಹೊರೆ ಪತ್ರಪುಷ್ಪಗಳನ್ನೂ ಇತರ ಅಲಂಕರಣಸಾಮಗ್ರಿಗಳನ್ನೂ ವಿಸರ್ಜಿಸಿ, ಜಲಮೂಲವನ್ನು ಕಲುಷಿತಗೊಳಿಸುವುದಾಗುತ್ತದೆ. ಪ್ರಭಾವಳಿ ಇತ್ಯಾದಿ ಅಲಂಕಾರಗಳನ್ನು ಮಾಡಲಿಚ್ಛಿಸುವವರು ಪೂಜೆಯ ನಂತರ ಅದನ್ನು ಜೋಪಾನವಾಗಿ ಶಾಶ್ವತವಾಗಿ ತೆಗೆದಿಟ್ಟು ಮುಂಬರುವ ವರ್ಷಗಳಲ್ಲಿ ಬಳಸಬೇಕು.
ಮೂರ್ತಿಯ ಗಾತ್ರಕ್ಕೆ ತಕ್ಕಂತೆ ನೈವೇದ್ಯ, ನೈವೇದ್ಯಕ್ಕೆ ತಕ್ಕಂತೆ ಅನ್ನಸಂತರ್ಪಣೆ-ವಿತರಣೆ ಎಂದು ಧರ್ಮಶಾಸ್ತ್ರಗಳಲ್ಲಿ ವಿಧಿಸಿದೆ. ಹಾಗಾಗಿ ಮನಸ್ವಿಯಾಗಿ ಮೂರ್ತಿಪ್ರಮಾಣವನ್ನು ಬೆಳೆಸಬಾರದು. ಮನೆಯಲ್ಲಿಟ್ಟು ಪೂಜಿಸುವ ವಿಗ್ರಹವು ಹಿಡಿಯಷ್ಟು ಇರುವುದು ಉತ್ತಮ. ಮುಷ್ಠಿಪ್ರಮಾಣದ ವಿಗ್ರಹಕ್ಕೆ ನಾಲ್ಕು ಮುಷ್ಠಿಯಷ್ಟು ಅಕ್ಕಿಯನ್ನು ಬೇಯಿಸಿ ನೈವೇದ್ಯ ಮಾಡಬೇಕು ಎಂದಿದೆ. ಹಾಗಾಗಿ ಮನೆಯಲ್ಲಿನ ಸದಸ್ಯರ ಪ್ರಮಾಣವನ್ನು ಗಮನಿಸಿಕೊಂಡು ಮಾಡಬೇಕು ಎಂದು ಶಾಸ್ತ್ರಕಾರರು ಹೇಳಿದ್ದಾರೆ. ಭಕ್ತಿಗೆ ಪ್ರದರ್ಶನವು ಸಲ್ಲದು ಎಂಬುದೇ ತಾತ್ಪರ್ಯ. ದೊಡ್ಡ ಮೂರ್ತಿಯನ್ನಿಟ್ಟು, ಅದಕ್ಕೆ ತಗುವಷ್ಟು ಪ್ರಸಾದವನ್ನು ಮಾಡಿ, ಅದನ್ನು ಹಂಚಲಾಗದೆ ಬಿಸುಡುವುದು ತಗದು. ಅನ್ನ ಪೋಲಾಗಬಾರದು, ಹಸಿದವರಿಗೆ ಇಲ್ಲದಂತೆಯೂ ಆಗಬಾರದು ಎಂಬುದನ್ನೆಲ್ಲ ಗಮನಿಸಿಕೊಂಡಿದೆ ಶಾಸ್ತ್ರ. ಇಂದಿನ ದೊಡ್ಡದೊಡ್ಡ ಅಕರಾಳವಿಕರಾಳವಾದ ಮೂರ್ತಿಗಳನ್ನು ಮೆರೆಸುವಲ್ಲಿ ಈ ಯಾವ ಕಾಳಜಿಯೂ ಗಮನಿತವಾಗಿಲ್ಲ ಎಂಬುದು ಬೇಸರದ ಸಂಗತಿ.
ಮೋಟಾರ್ ಬೈಕ್ ಗಣಪ, ವಿಮಾನಗಣಪ, ವೀರಪ್ಪನ್ ಗಣಪ ಇತ್ಯಾದಿ ಸಾರ್ವಜನಿಕ ಗಣಪ: ಜನರ ಪ್ರೀತಿಭಕ್ತಿಗಳಿಂದ ವಿಗ್ರಹಕ್ಕೆ ಅಲಂಕಾರದ ಆಯಾಮವೊದಗುತ್ತದೆ. ನಮ್ಮ ದೇವತೆಗಳು ನಮ್ಮ ಬದುಕಿನ ಭಾಗವೇ ಆಗಿರುವುದು ಸನಾತನಧರ್ಮದ ಸ್ವಾರಸ್ಯ. ನಮ್ಮ ಕಲ್ಪನೆಗೆ ಅವಕಾಶವುಂಟು. ಆದರೆ ಸಲಿಗೆಯು ಉಪೇಕ್ಷೆಯ ಮಟ್ಟಕ್ಕೆ ಹೋಗಬಾರದು. ಅತಿಥಿ-ಅಭ್ಯಾಗತರನ್ನು ತುಚ್ಛವಾಗಿ ಕಾಣಬಾರದು. ಭಕ್ತಿಯನ್ನು ಮರೆಯಿಸಿ ಲಾಘವವು ಆಕ್ರಮಿಸಬಾರದು. ಈ ಸಾರ್ವಜನಿಕ ಆಚರಣೆಗೆ ಇನ್ನೊಂದು ಆಯಾಮವಿದೆ. ರಾಜಕೀಯಕ್ಕೆ ಪಾದಾರ್ಪಣೆ ಮಾಡುವವರು ಸಾರ್ವಜನಿಕ ಗಣೇಶೋತ್ಸವವನ್ನು ನಡೆಸುವುದನ್ನು ನೆವವಾಗಿಸಿಕೊಂಡಿದ್ದಾರೆ. ತಿಲಕರ ಉದಾತ್ತ ಉದ್ದೇಶವು ಈಗ ಹೀಗೆ ಹೀನಾಯರೂಪವನ್ನು ತಾಳಿದೆ. ಸಾರ್ವಜನಿಕವಾದ ಆಚರಣೆಗಳ ಅಂಗವಾಗಿ ಸಂಗ್ರಹಿಸಲಾಗುವ ಚಂದಾಹಣಕ್ಕೊಂದು ಜವಾಬ್ದಾರಿ ಬೇಕು. ಯಾರು ಸಾರ್ವಜನಿಕ ಹಣವನ್ನು ದುಂದುಮಾಡುತ್ತಾನೋ ಅವನು ಮುಂದೆ ಹದ್ದಾಗಿ ಕಾಗೆಯಾಗಿ ಜನ್ಮವೆತ್ತುತ್ತಾನೆ ಎಂದಿದೆ ಮನುಸ್ಮೃತಿ. ಗಣದ್ರವ್ಯಂ ಹರೇದ್ಯಸ್ತು ಕಾಕತಾಂ ಭಾಸತಾಂ ವ್ರಜೇತ್. ಅರ್ಥಶಾಸ್ತ್ರದಲ್ಲಿ ಚಾಣಕ್ಯನೂ ಇಂಥ ಎಚ್ಚರಿಕೆಯನ್ನು ಹೇಳಿದ್ದಾನೆ.
ವಿಸರ್ಜನೆ: ಮೂರ್ತಿ ದೊಡ್ಡದಾದಷ್ಟೂ ವಿಸರ್ಜನೆಯು ಕಷ್ಟಕರವಾಗುತ್ತದೆ. ಸೇತುವೆಯ ಮೇಲಿನಿಂದ ಗಣೇಶವಿಗ್ರಹವನ್ನು ಕೆರೆಯೊಳಕ್ಕೆ ದೂಡಿಬಿಡುವ ನಿದರ್ಶನಗಳು ಯುಟ್ಯೂಬಿನಲ್ಲಿ ಕಾಣಸಿಗುತ್ತವೆ. ಬಾಳೆಕಂದು ನಿರ್ಮಾಲ್ಯ ಇತ್ಯಾದಿಗಳನ್ನು ಗೊಬ್ಬರವಾಗಿಸಬೇಕು. ಬಾಳೆಕಂದಿನ ಎಲೆಗಳನ್ನು ಮುಂದಿನೆರಡು ದಿನಗಳ ಉಪಾಹಾರಕ್ಕಾಗಿ ಬಳಸುವುದು ಯುಕ್ತ; ನಾನು ಮಾಡುವುದೇ ಹಾಗೆಯೇ, ಅನೇಕರು ಹೀಗೆ ಮಾಡುತ್ತಾರೆ. ಯಾವ ವಸ್ತುವನ್ನೂ ಪೋಲುಮಾಡದೆ ಗರಿಷ್ಠವಾಗಿ ಬಳಸಿಕೊಳ್ಳಬೇಕು. ಪೂಜೆಯಲ್ಲಿ ಗಮನಿಸಿಕೊಳ್ಳಬೇಕಾದ್ದು ಪ್ರದರ್ಶನಕ್ಕಿಂತ ದರ್ಶನ. ಪೂಜೆಯಲ್ಲಿನ ಸರಳತೆಯು ಶಾಸ್ತ್ರಕಾರರಿಂದ ಅಂಗೀಕೃತವಾಗಿದೆ. ಕೃತಕವಸ್ತುಗಳ ಬಳಕೆಯನ್ನು ಕನಿಷ್ಠವಾಗಿಸಬೇಕು. ಇಂದಿನ ವಿದ್ಯುನ್ಮಾನತ್ಯಾಜ್ಯಕ್ಕೆ (e-waste) ಹೋಲಿಸಿದರೆ ಈ ಸಾವಯವತ್ಯಾಜ್ಯವು (biodegradable waste) ನಿರಪಾಯಕಾರಿಯಾದದ್ದು. ಈ ಸಾವಯವತ್ಯಾಜ್ಯವನ್ನೂ ಕನಿಷ್ಠವಾಗಿಸಬೇಕು. ನೀರು ಇಲ್ಲದ ಸಂದರ್ಭಗಳಲ್ಲಿ ಮರಳಿನಲ್ಲಿ ಹೂಳಬೇಕು ಎಂದಿದೆ. ಸನಾತನಧರ್ಮದ ಅನುಕೂಲತೆಯೆಂದರೆ, ಅದು ಆಯಾ ಕಾಲಕ್ಕೆ ತಕ್ಕಂತೆ ಒಗ್ಗಿಕೊಂಡು ಬಂದಿರುವುದು.
ಆಶಯ: ಭಕ್ತಿಪ್ರೀತಿಗಳು ಬಹಳ ಮುಖ್ಯ. ಸನಾತನಧರ್ಮದ ಮೌಲ್ಯಗಳನ್ನು ಅಂತರಂಗಕ್ಕೆ ತಂದುಕೊಳ್ಳುವುದು ಹೀಗೇಯೇ. ಸರ್ವೇಷಾಂ ಅವಿರೋಧೇನ ಬ್ರಹ್ಮಕರ್ಮ/ವೈದಿಕಕರ್ಮ – ಯಾರಿಗೂ ವಿರೋಧವಾಗದಂತೆ ಮಾಡಬೇಕಾದ್ದು ಇದು. ಪ್ರದರ್ಶನಪರವಾದ ಅಸಂಬದ್ಧ ಹಾಡು ಹಾಗೂ ಸಿಡಿಪಟಾಕಿಗಳ ಗಡಚಿಕ್ಕುವ ಶಬ್ದಮಾಲಿನ್ಯದಿಂದ ಕೂಡಿದ ಅಬ್ಬರದ ಪೂಜೆಯು ರಾಜಸವೆನಿಸಿದರೆ, ಅಬ್ಬರದ ಜೊತೆಗೆ ಮಾಲಿನ್ಯವು ಸೇರಿದರೆ ಅದು ತಾಮಸಪೂಜೆಯಾಗುತ್ತದೆ. ವಿಸರ್ಜನೆಗೆ ಹೊರಡುವ ಮೆರವಣಿಗೆಯು ವಾಹನಸಂಚಾರಕ್ಕೆ ಸಂಚಕಾರಪ್ರಾಯವಾಗಿರುತ್ತದೆ. ನಾವು ಮಾಡಬೇಕಾದ್ದು ಸಾತ್ತ್ವಿಕಪೂಜೆ. ನಮ್ಮ ಆಚರಣೆಯು ಸಾರ್ವಜನಿಕಜೀವನಕ್ಕೆ ಕುತ್ತಾಗಬಾರದು. ನಮ್ಮ ಸುತ್ತಲಿನ ಜಗತ್ತು ಪರಮಾತ್ಮನ ಮತ್ತೊಂದು ರೂಪವೇ ಆಗಿದೆ. ಸನಾತನಧರ್ಮದಲ್ಲಿ ಪರಮಾತ್ಮ ಮಾತ್ರವಲ್ಲದೆ ಪರಮಾತ್ಮಸೃಷ್ಟಿಯೂ ಪರಮಾತ್ಮವೇ. ನೀರು-ಮಣ್ಣು-ವಾಯು-ಶಬ್ದಗಳ ಭೌತಿಕಮಾಲಿನ್ಯವಲ್ಲದೆ, ಮಾಲಿನ್ಯದ ತಾತ್ತ್ವಿಕರೂಪವು ಗೋಚರಿಸಿತಲ್ಲವೆ?
ತಾವೇ ಗಣಪತಿಯನ್ನು ತಯಾರಿಸಲಾಗದವರು ಬಣ್ಣದ ವಿಗ್ರಹವನ್ನು ಬಳಸುವುದಿಲ್ಲವೆಂದು ಶಪಥಗೈಯುವುದು, ಅರಿಶಿನಗೌರಿಯನ್ನು ಪೂಜಿಸುವುದ್ ಮಾಡಬೇಕು. ಅಪ್ಪಟಮಣ್ಣಿನದು ಸಿಗುತ್ತಿಲ್ಲವೆಂದರೆ, ಲೋಹವಿಗ್ರಹವನ್ನಿಟ್ಟು ಪಿಳ್ಳಾರಿಯನ್ನು ಮಾಡಿ ಪೂಜಿಸಬೇಕು. ಅದರಲ್ಲೂ ಕೆರೆಗಳು ಒತ್ತುವರಿಯಾಗಿರುವ ಬೆಂಗಳೂರಿನಂಥ ಸೂಕ್ಷ್ಮಪರಿಸರದಲ್ಲಂತೂ ಆಡಂಬರ ಬೇಡ. ಚಿಕ್ಕಗಾತ್ರದ ವಿಗ್ರಹವನ್ನಿಡಿ. ಭಕ್ತಿ ದೊಡ್ಡದಿರಲಿ. ಸಾರ್ವಜನಿಕವಾಗಿ ಆಚರಿಸುವವರು ಗಾತ್ರಕ್ಕೆ ಮರುಳಾಗಬೇಡಿ. ಗಾತ್ರಕ್ಕಿಂತ ಮುಖ್ಯವಾದುವೆಂದರೆ, ಹಬ್ಬದ ನೆವದಿಂದ ಅನ್ನವಿತರಣೆ, ಸಂಗೀತಕಛೇರಿ, ಮಕ್ಕಳಿಗೆ ಸ್ಪರ್ಧೆಗಳು ಇತ್ಯಾದಿಗಳ ಮೂಲಕ ಗಣಪತಿಯ ವಿದ್ಯಾಸ್ವರೂಪ-ಪ್ರಾಕೃತಿಕಸ್ವರೂಪಕ್ಕೆ ಉತ್ತೇಜನ ನೀಡುವುದು.

Courtesy: Sri Ranganath Prasad post in Facebook

Saturday, April 2, 2016

April 2016 Events

ದಿನಾಂಕ: 24
ಸಮಯ: ಸಂ.5
ವಿಷಯ: ಶ್ರೀ ಗಣೇಶಭಟ್ಟ ಕೊಪ್ಪಲತೋಟರ ಅಷ್ಟಾವಧಾನದಲ್ಲಿ ಪಾರ್ಛಕ್ಯ
ಸ್ಥಳ: ಶ್ರೀ ರಾಮಸೇವಾ ಮಂಡಳಿ (ಮಾಸ್ತಿ ರಂಗಮಂದಿರ), ಶಂಕರಮಠ ರಸ್ತೆ, ಶಂಕರಪುರ
----------------------------------------------------------------------------------------
ದಿನಾಂಕ: 26-30
ಸಮಯ: ಸಂ.6.30-8
ವಿಷಯ: ಬಾಣಭಟ್ಟನ ’ಕಾದಂಬರಿ’
ಸ್ಥಳ: ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆ, ಬಸವನಗುಡಿ
------------------------------------------------------------------------------------------

Thursday, February 4, 2016

Feb 2016 Events

ಬೆಂಗಳೂರಿನಲ್ಲಿ:

ದಿನಾಂಕ: 12
ಸಮಯ: ಬೆ.10
ವಿಷಯ: Why we should read Kalidasa – Seminar on Kalidasa
ಸ್ಥಳ: ಶೇಷಾದ್ರಿಪುರಂ ಕಾಲೇಜು, ಶೇಷಾದ್ರಿಪುರಂ
----------------------------------------------------------------------------------------------------------------------------------
ದಿನಾಂಕ: 13-14
ಸಮಯ: ಸಂ.6.30-8
ವಿಷಯ: ಬಸವಪ್ಪಶಾಸ್ತ್ರಿಗಳ ದಮಯಂತೀಸ್ವಯಂವರ
ಸ್ಥಳ: ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆ, ಬಸವನಗುಡಿ
----------------------------------------------------------------------------------------------------------------------------------
ದಿನಾಂಕ: 24-5 ಮಾರ್ಚ್
ಸಮಯ: ಸಂ.6-8
ವಿಷಯ: ಕುಮಾರವ್ಯಾಸಭಾರತವ್ಯಾಖ್ಯಾನ, ಶ್ರೀ ಕೆದಿಲಾಯರಿಂದ ವಾಚನ
ಸ್ಥಳ: ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆ, ಬಸವನಗುಡಿ
----------------------------------------------------------------------------------------------------------------------------------
ಇತರ ಸ್ಥಳಗಳಲ್ಲಿ:

ದಿನಾಂಕ: 16-17
ವಿಷಯ: Indian theory of communication and aesthetics
ಸ್ಥಳ: Management college, Ahmedabad

Sunday, January 3, 2016

Jan 2016 Events

ಬೆಂಗಳೂರಿನಲ್ಲಿ:

ದಿನಾಂಕ: 5
ಸಮಯ: 9am
ವಿಷಯ: Vedic Way of Life
ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಬನ್ನೇರುಘಟ್ಟರಸ್ತೆ

ದಿನಾಂಕ: 7,8
ಸಮಯ: ಸಂ.6.30 to 8
ವಿಷಯ:ಭಟ್ಟನಾರಾಯಣನ ನಾಟಕ ವೇಣೀಸಂಹಾರ
ಸ್ಥಳ: ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆ, ಬಸವನಗುಡಿ

ದಿನಾಂಕ: 10
ಸಮಯ: ಸಂ.5
ವಿಷಯ:ಅಷ್ಟಾವಧಾನ
ಸ್ಥಳ: ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆ, ಬಸವನಗುಡಿ

ದಿನಾಂಕ:16
ಸಮಯ: ಸಂ.5
ವಿಷಯ:ಅಷ್ಟಾವಧಾನ
ಸ್ಥಳ: ಪ್ರಸನ್ನಗಣಪತಿ ದೇವಸ್ಥಾನ, ಕಲ್ಯಾಣನಗರ

ದಿನಾಂಕ: 24
ಸಮಯ: (ಬೆ......)
ವಿಷಯ:’ಭಾರತೀಯ ಕ್ಷಾತ್ರಪರಂಪರೆ’ – ಶ್ರೀ ಎಸ್. ಎಲ್. ಭೈರಪ್ಪನವರಿಂದ ಬಿಡುಗಡೆ
ಸ್ಥಳ: ಎನ್.ಎಂ.ಕೆ.ಆರ್.ವಿ. ಅಥವಾ ಕೇಶವಶಿಲ್ಪ (ತಿಳಿಸಲಾಗುವುದು)
----------------------------------------------------------------------------------------------------------------------------------

ಇತರ ಸ್ಥಳಗಳಲ್ಲಿ:

ದಿನಾಂಕ:18
ಸಮಯ:---
ವಿಷಯ:Uddeepanavibhaava-s pertaining to dance
ಸ್ಥಳ:ಶಾರ್ಙದೇವ ಸಮಾರೋಹ, ಔರಂಗಾಬಾದ್
----------------------------------------------------------------------------------------------------------------------------------
ದಿನಾಂಕ:22
ಸಮಯ:(ಅಪರಾಹ್ನ2.30)
ವಿಷಯ:ಸಾಹಿತ್ಯಸಂಭ್ರಮ – ಅವಧಾನವನ್ನು ಕುರಿತ ಪ್ರಾತ್ಯಕ್ಷಿತೆ
ಸ್ಥಳ:ಧಾರವಾಡ ವಿಶ್ವವಿದ್ಯಾನಿಲಯ
----------------------------------------------------------------------------------------------------------------------------------

Tuesday, March 31, 2015

April 2015 Events

ದಿನಾಂಕ: 04
ಸಮಯ: ಸಂ. 6-8
ವಿಷಯ: ಕೆ.ಎಸ್.ನ. ನೆನಪು – ಅವರ ಕವೆತೆಗಳ ಗಾಯನಕ್ಕೆ ವ್ಯಾಖ್ಯಾನ
ಸ್ಥಳ: ಜೆ.ಎಸ್.ಎಸ್. ಸಭಾಂಗಣ, ಜಯನಗರ ೮ನೆಯ ಬ್ಲಾಕ್
----------------------------------------------------------------------------------------------------------------------------------
ದಿನಾಂಕ: 06-12
ಸಮಯ: ಸಂ. 6-8
ವಿಷಯ: ಕುಮಾರವ್ಯಾಸ ಭಾರತ ವಾಚನಕ್ಕೆ ವ್ಯಾಖ್ಯಾನ
ಸ್ಥಳ: ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆ, ಬಸವನಗುಡಿ
----------------------------------------------------------------------------------------------------------------------------------
ದಿನಾಂಕ: 14
ಸಮಯ: ಸಂ. 6.30-8
ವಿಷಯ: ಶ್ರೀ ಎಸ್.ಎಲ್.ಭೈರಪ್ಪನವರ ’ವಂಶವೃಕ್ಷ’ ಕುರಿತು
ಸ್ಥಳ: ಗಾಂಧೀ ಸಾಹಿತ್ಯ ಸಂಘ, ಮಲ್ಲೇಶ್ವರ
----------------------------------------------------------------------------------------------------------------------------------
ದಿನಾಂಕ: 18
ಸಮಯ: ಸಂ. 6.30-8
ವಿಷಯ: ಸಂಸ್ಕೃತ ಕವಿಗಳ ವಿನಯ, ವಿದ್ವತ್ತೆ, ಅಭಿಮಾನ, ಅಹಂಕಾರ
ಸ್ಥಳ: ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆ, ಬಸವನಗುಡಿ
----------------------------------------------------------------------------------------------------------------------------------
ದಿನಾಂಕ: 21
ಸಮಯ: ಸಂ. 6.30-8
ವಿಷಯ: ಆಚಾರ್ಯ ಶಂಕರರ ಬುದ್ಧಿ ಮತ್ತು ಭಾವ
ಸ್ಥಳ: ಕೆನರಾ ಯೂನಿಯನ್, ಮಲ್ಲೇಶ್ವರ
----------------------------------------------------------------------------------------------------------------------------------
ದಿನಾಂಕ: 25-30
ಸಮಯ: ಸಂ. 6.30-8
ವಿಷಯ: ಬಾಣಭಟ್ಟನ ಕಾದಂಬರಿ
ಸ್ಥಳ: ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆ, ಬಸವನಗುಡಿ
----------------------------------------------------------------------------------------------------------------------------------